ಶ್ರಾವಣ
	ವರ್ಷಋತುವಿನ ಸಂದರ್ಭದಲ್ಲಿ ಬರುವ ಒಂದು ಮಾಸ ಹಾಗೂ ಹಬ್ಬ. ಶ್ರಾವಣಮಾಸದ ಶುಕ್ರವಾರಗಳಲ್ಲಿ, ವಿಶೇಷವಾಗಿ ಹುಣ್ಣಿಮೆಯ ಹಿಂದಿನ ಶುಕ್ರವಾರ ವರಮಹಾಲಕ್ಷ್ಮಿಯ ಪೂಜೆ ನಡೆಯುತ್ತದೆ. ತಳಿರುತೋರಣ, ಬಾಳೆಕಂಬ ಮುಂತಾದವುಗಳಿಂದ ಅಲಂಕೃತವಾದ ಮಂಟಪದಲ್ಲಿ ರತ್ನಾಭರಣಗಳಿಂದಲೂ ಮಂಗಳ ದ್ರವ್ಯಗಳಿಂದಲೂ ಸಿಂಗರಿಸಿರುವ ಲಕ್ಷ್ಮಿಯ ಪ್ರತಿಕೃತಿಯನ್ನು ಷೋಡಶೋಪ ಚಾರಗಳಿಂದ ಪೂಜಿಸಿ ಮರದ ಬಾಗಿನಕೊಟ್ಟು ಮುತ್ತೈದೆಯರಿಗೆ ಭೋಜನ ನೀಡುತ್ತಾರೆ. ಕಲಶದಲ್ಲಿ ಲಕ್ಷ್ಮಿಯನ್ನು ಆವಾಹನೆ ಮಾಡಿ ಪೂಜಿಸುವ ಪದ್ಧತಿಯೂ ಇದೆ. ಪ್ರಸಿದ್ಧವಾದ ಮಂಗಳಗೌರಿವ್ರತ, ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿಗಳೂ ಈ ಮಾಸದಲ್ಲಿಯೇ ಆಚರಣೆಗೊಳ್ಳುತ್ತವೆ.

	ಜನಪದರಲ್ಲಿ ತಿರುಪತಿ ತಿಮ್ಮಪ್ಪನ ಪೂಜೆಗೆ ಮೀಸಲಾದ ವಾರಗಳು ಶ್ರಾವಣ ಶನಿವಾರಗಳು. ಆ ದೇವರಿಗೆ ನಡೆದು ಕೊಳ್ಳುವ ಒಕ್ಕಲುಗಳು ಆ ದಿನಗಳಲ್ಲಿ ಹಣೆಯ ಮೇಲೆ ಮೂರು ನಾಮ ಧರಿಸಿ ಶ್ರೀಮನ್ನಾರಾಯಣ ಗೋವಿಂದ, ಗೋವಿಂದ ಎಂದು ಹೇಳುತ್ತಾ ಐದು ಮನೆಗಳಿಗಾದರೂ ಹೋಗಿ ಭಿಕ್ಷೆ ತರಬೇಕೆಂಬ, ಯಥಾಶಕ್ತಿ ದಾನ, ಸಂತರ್ಪಣೆಗಳನ್ನೂ ಮಾಡಬೇಕೆಂಬ ಸಂಪ್ರದಾಯವಿದೆ. ಇದನ್ನು ಸಿರಿಸಂಪತ್ಪ್ರದ ಶನಿವಾರವೆಂದು ತಿಳಿದು ತಂಬಿಟ್ಟಿನಲ್ಲಿ ತುಪ್ಪದ ದೀಪವನ್ನು ಹಚ್ಚಿಡುತ್ತಾರೆ. ಅಂದು ಸಹಿಯೂಟದ ಏರ್ಪಾಟಿರುತ್ತದೆ. ಈ ದಿನಗಳಲ್ಲಿ ಶ್ರೀನಿವಾಸನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತಿರುಪತಿ ಯಾತ್ರೆಗೆ ಹೋಗುತ್ತಾರೆ. ಜನಪದರಲ್ಲಿ ಶ್ರಾವಣಹಬ್ಬದ ಆಚರಣೆ ವಿಶೇಷ.			
							*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ